ಬಿಳಿಮತ್ತಿ
ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಹೊಳೆಮತ್ತಿ ತೊರಮತ್ತಿ ಪರ್ಯಾಯನಾಮಗಳು. ವೈಜ್ಞಾನಿಕ ಹೆಸರು ಟರ್ಮಿನೇಲಿಯ ಅರ್ಜುನ. ಅಳಲೆ, ತಾರೆಮರಗಳ ಹತ್ತಿರ ಸಂಬಂಧಿ.

ಭಾರತವೇ ಇದರ ತವರು ಎನ್ನಲಾಗಿದೆ. ಭಾರತಾದ್ಯಂತ ನದಿ, ತೊರೆ, ಹಳ್ಳಗಳ ದಂಡೆಗಳಲ್ಲಿ ಇದು ಕಾಣದೊರೆಯುತ್ತದೆ. ಮೆಕ್ಕಲು ಮಣ್ಣಿನ ಭೂಮಿಗಳಲ್ಲಿ ಬಲು ಸಮೃದ್ಧವಾಗಿ ಬೆಳೆಯುತ್ತದೆ. ಒರಿಸ್ಸದಲ್ಲಿ, ಆಂಧ್ರದ ಕೆಲವು ಭಾಗಗಳಲ್ಲಿ, ಬಂಗಾಳದಲ್ಲಿ ಇದನ್ನು ನೆರಳಿಗಾಗಿ ಅಲಂಕಾರಕ್ಕಾಗಿ ಬೆಳೆಸಲಾಗುತ್ತದೆ.

ಇದು ಸುಮಾರು 20 ಮೀ ಎತ್ತರಕ್ಕೆ ಬೆಳೆಯುತ್ತದೆ. ತುಂಬ ಮಂದವಾದ ನಯವಾದ ಬೂದಿ ಇಲ್ಲವೆ ನಸಗೆಂಪು ಮಿಶ್ರಿತ ಹಸಿರು ಬಣ್ಣದ ತೊಗಟೆಯುಂಟು. ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಪ್ಯಾನಿಕಲ್ ಬಗೆಯ ಗೊಂಚಲುಗಳಲ್ಲಿ ಅರಳುವುವು. ಹೂ ಅರಳುವ ಕಾಲ ಮಾರ್ಚ್-ಜೂನ್. ಕಾಯಿಗಳು 2.5-5 ಸೆಂಮೀ ಉದ್ದದವೂ ಅಂಡಕಾರದವೂ ಆಗಿವೆ. ಮೇಲ್ಮೈ ಐದು ಇಲ್ಲವೆ ಏಳು ಏಣುಗಳುಳ್ಳದ್ದು.

ಬಂಡಿ, ಕೃಷಿ ಉಪಕರಣಗಳು, ಬಾವಿಗಳು, ದೋಣಿ, ಗಣಿ ಆಸರೆಕಂಬ ಹತ್ಯಾರುಗಳ ಹಿಡಿ, ಮುಂತಾದವುಗಳ ತಯಾರಿಕೆಗೆ ಬಿಳಿಮತ್ತಿಯ ಚೌಬೀನೆ, ಉಪಯುಕ್ತವೆನಿಸಿದೆ. ಪ್ಲೈವುಡ್ ತಯಾರಿಕೆಗೂ ಕಟ್ಟಡಗಳಿಗೂ ಇದನ್ನು ಬಳಸಬಹುದೆನ್ನಲಾಗಿದೆ. ರೇಯಾನ್ ತಯಾರಿಸಲು ಇದನ್ನು ಉಪಯೋಗಿಸುವ ಯತ್ನಗಳೂ ನಡೆದಿವೆ. ಚರ್ಮ ಹದಮಾಡುವ ಟ್ಯಾನಿಂಗ್ ಸಾಮಗ್ರಿಯಾಗಿ ಈ ಮರದ ತೊಗಟೆಯನ್ನು ಉತ್ತರ ಪ್ರದೇಶ, ಮಧ್ಯ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇದರ ಎಲೆ, ಕಾಯಿ, ತೊಗಟೆಗಳಿಗೆ ಔಷಧೀಯ ಮಹತ್ತ್ವವೂ ಉಂಟು.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ